Thursday, March 17, 2011

ಬಿಡು ಭಯ


ಕಲ್ಲಿಗಿಲ್ಲ ಮುಳ್ಲಿಗಿಲ್ಲ

ಹೂವಿಗೇಕೆ ಸೌಸವ ~ ಅಡಿಗ

ನಿನಗೆಂದೇ ಪ್ರತ್ಯೇಕ

ನುಡಿಯೊಲುಮೆ;

ಭಾವ ಚೆಲುವ ಒಡಲ ದನಿ

ಒಲುಮೆ ತೊರೆಯ ಹಂಗು;

ನಿತ್ಯ ಇರಲಿ ಕಾತುರ

ಇದ್ದರೇನು ಇನಿಯ ದೂರ

ಭಯವೇ ಬರದು ಹತ್ತಿರ

Tuesday, March 15, 2011

ಸಾಕ್ಷಿ


ಕಡಲ ತಡಿಯ ಉಸುಕಿನ

ದಂಡೆಯಲಿ ಕಾಲೂರಿ- ನಿಂತಂತೆ

ಅಂಟಿದ ಮರಳ ಕೊಡವಿ- ನಡೆವಂತೆ

ಈಗ;
ಅವಳು ಮುಟ್ಟಿದೆಡೆ

ಸೋಪು ನಾರುತಿಲ್ಲ

ಕನ್ನಡಿಯ ಮೇಲೆ ಬಿಂದಿ ಹಚ್ಚಿಟ್ಟು ಮರೆತಿಲ್ಲ

ಕಿಟಕಿ ಸರಳಿನಲಿ ನವಿಲ ನೀಲಿ ಕಣ್ಣ ನೆನಪಿಸುವ

ಹೇರಳ ಕೂದಲೂ ಉಳಿದಿಲ್ಲ

ಈಗವಳು ನಡೆದ ಕುರುಹು ಇಲ್ಲ

ಎಲ್ಲ ಇಲ್ಲವಾಗುತ್ತಲೆ

ಇದ್ದಾಗಿನ ಸಾಕ್ಷ್ಯಗಳ ನೆನಪು

Friday, February 18, 2011

ನಿಲುವುಗಳ ಹಿಂದೆ


ಹಾದರದಲಿ ದಣಿದು ಬಂದವಗೆ

ಹೆಂಡತಿಯ ಕಣ್ಣ ನೋಟ ಇರಿದಂತೆನಿಸಿ

ಕಾಣದೆ ನಡೆಸಿದ ಸಂಚುವಮಾನಕ್ಕೆ ದೂಡಿತು



ಮತ್ತೆ
-ಮತ್ತೆ ನೋಡಲಾಗ; ಪೆದ್ದುತನ

ಬುದ್ದಿವಂತಿಕೆಯ ನಾಚಿಸಿ

ಮುಗ್ದತೆ; ನಿಷ್ಕಾಮ ಪ್ರೀತಿ- ಒಲವ ಗೆದ್ದಿತು

Wednesday, February 9, 2011

ಹಾಯ್ಕುಗಳ ಮೊದಲ ಸಾಲುಗಳು

  • ದಿನವೂ ನಡೆ ಹಾದಿಯಲಿ ಕಾಣಸಿಗುವ ಜವಳಿ ಅಂಗಡಿಯ ಗೊಂಬೆಗೆ ನಾನು ನಾಚಿಕೊಳ್ಳುವ ಕಾರಣ ಗೊತ್ತಿರಬಹುದೆಂಬ ಗುಮಾನಿಯಿದೆ!!
  • ಆ ಹಾಡುಗಾರ್ತಿಯ ಮನೆಯ ಪಂಜರದಲಿ ಕೋಗಿಲೆಗೆ ಬದಲು ಗಿಳಿಯಿದೆ!
  • ಸದಾ ಬಡವನ ಹಸಿವಿಗೆ ಸ್ಪಂದಿಸುವುದಾಗಿದ್ದ ಮೈಕಿನ ಮೌತ್ ಪೀಸೊಂದರ ಜೀವ ಬಡಾಯಿಕೊರನ ಕೈಯ್ಯಲ್ಲಿದೆ!


Friday, February 13, 2009

ಅವಳು ಹೇಳಿಸಿದ ಪದ್ಯ

ನನ್ನ ನಿನ್ನ ನಡುವೆ
ಎಷ್ಟು ಮಾತಾಯಿತು
ಹರಿವ ಹೊಳೆಯ
ಸಾಕ್ಷಿ;

ತೀರದಲಿ ನೀನು
ಎಂದಿನಂತೆ
ಅಂಬಿಗನ ತೋಳ ಬಲದಲಿ
ನಾನು ಆಗಿನಂತೆ!

ಹಬ್ಬಕ್ಕೊ, ಜಾತ್ರೆಗೋ
ನಿನ್ನ ಕರೆ
ಅಕ್ಕರೆಯ ಧ್ವನಿ
ಎಲ್ಲ ಸಂತಸಕ್ಕೆ
ಮತ್ತೆ ಹರಿವ ತೊರೆಯ
ಹಂಗು ನನಗೆ
ನಿನ್ನ ನೆನಪ ನೆಪದ
ಜೊತೆಗೆ

Friday, December 19, 2008

ಕನಸು

ಪ್ರಪಾತದ ತುತ್ತುದಿಯಿಂದ

ಜಿಗಿವಾಗ

ಮದ್ಯೆ ಮರೆತೇಹೋಯಿತು

ಕಲಿತ ಈಜು










ಏಲಿಯೆಟ್ಟನ ಹಳದಿ ಬೆಳಕಿನ

ಸಂಜೆಯಲಿ ಕಫ್ಕಾನ ನಾಯಕರು

ಮುಗುಳ್ನಕ್ಕರು



ದುತ್ತನೆರಗಿದ ಕಾಡಿನಲಿ

ಗುತ್ತಿ ಸಿಗಲಿಲ್ಲ

ತಗಡು ಡಬ್ಬಿಯಲಿ

ಕೆಂಡದಹೊಗೆಯೊಂದಿಗೆ

ನಡೆವ ಹುಚ್ಚರು

ಜೊತೆಯಾದರು

ಹೊಸ ವರುಷ ೨೦೦೯


ಕಾಲ-ಯಮನ
ಗರಡಿಯಲಿ ಮತ್ತೊಂದು
ಬಲಿಯುತಿದೆ
ಹೊಸವರುಷ

Monday, December 1, 2008

ಧ್ವನಿ


ಹಾಡಲು ಕಲಿಸಿದ

ಹಕ್ಕಿಯೇ

ನನ್ನ ಧ್ವನಿಯನ್ನು ಹಿಂದಿರುಗಿಸು;

ನಾನು ನಾಳೆಗಳಿಗೆ

ನಡೆಯಬೇಕಿದೆ

ಭಯವಿಲ್ಲದೆ


ಸುಮ್ಮನೆ

ಅರಳಬೇಕು;

ಮುದುಡುವ,

ಬಾಡುವ,

ಉದುರುವ ಭಯವಿಲ್ಲದೆ

ಪದ್ಯ










ಚಿತ್ರದಲಿ




ಹಗಲಾಗಿಲ್ಲ




ಅದಕ್ಕೆ ಈ




ಪದ್ಯ ಮುಗಿದಿಲ್ಲ








ಇವೆಲ್ಲ ನನ್ನ ಸುತ್ತ ಕಟ್ಟಿದ




ಗೋಡೆಯ ಮೇಲೆ ಮೂಡಿದವು




ಹೊರ ಪರಿಸರದಿಂದ




ಅವಮಾನಿತವಾದವು